Monday, November 28, 2011

ಜೈಲು ಕಾಯಲು ರೊಬೋಟ್





ಜೈಲು ಕಾಯಲು ರೊಬೋಟ್
ದಕ್ಷಿಣ ಕೊರಿಯಾದ ಜೈಲೊಂದರಲ್ಲಿ ರೊಬೋಟುಗಳನ್ನು ಕಾವಲುಗಾರರಾಗಿ ಬಳಸಲಾಗುತ್ತಿದೆ.ಅವು ಇತರ ಕಾವಲುಗಾರರಿಗೆ ಖೈದಿಗಳ ಮೇಲೆ ಕಣ್ಣಿಡಲು ಸಹಾಯ ಮಾಡಲಿವೆ.ಖೈದಿಗಳು ಸಂಶಯಾಸ್ಪದ ನಡವಳಿಕೆ ಪ್ರದರ್ಶಿಸಿದರೆ,ಸೂಚನೆ ನೀಡುತ್ತವೆ.ಹೀಗಾಗಿ,ಇತರ ಕಾವಲಿನವರ ಕೆಲಸ ಹಗುರವಾಗುತ್ತದೆ.ರೊಬೋಟುಗಳ ಬಗ್ಗೆ ಸಂಶೋಧನೆಗೆ ದಕ್ಷಿಣ ಕೊರಿಯಾ ಗಮನ ಹರಿಸಿದೆ.ಜಪಾನ್ ಈ ನಿಟ್ಟಿನಲ್ಲಿ ಈಗಾಗಲೇ ದಾಪುಗಾಲು ಹಾಕಿದ್ದು,ದಕ್ಷಿಣ ಕೊರಿಯಾವು ಭಾರೀ ಬಜೆಟ್ ಹೂಡಿ,ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.ದೇಶದ ದಕ್ಷಿಣ ಭಾಗದ ಪೊಹಾಂಗ್ ಜೈಲಿನಲ್ಲಿ ಈ ರೊಬೋಟುಗಳ ಬಳಕೆ ನಡೆದಿದೆ.ಒಂದೂವರೆ ಮೀಟರ್ ಎತ್ತರದ ರೊಬೋಟುಗಳನ್ನು ದಕ್ಷಿಣ ಕೊರಿಯಾದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಅವರುಗಳು ಜೈಲು ನಿಯಮ ಮತ್ತು ಅಪರಾಧೀಕರಣ ವಿಷಯದಲ್ಲಿ ಪರಿಣತಿ ಹೊಂದಿದದವರು.ರೊಬೋಟುಗಳು ಚಲಿಸಲು ನಾಲ್ಕು ಚಕ್ರಗಳಿವೆ.ಕ್ಯಾಮರಾ,ಸೆನ್ಸರುಗಳನ್ನೂ ರೊಬೋಟ್ ಹೊಂದಿವೆ.ಕ್ಯೋಂಗಿ ವಿಶ್ವವಿದ್ಯಾಲಯದ ಲೀ-ಬೈಕ್-ಚು ರೊಬೋಟುಗಳನ್ನು ವಿನ್ಯಾಸಗೊಳಿಸಿದ್ದಾರೆ.ಒಂದು ತಿಂಗಳ ಮಟ್ಟಿಗೆ ಈ ಪ್ರಯೋಗ ಮುಂದುವರಿಯಲಿದೆ.ರೊಬೋಟಿನ ಆಪರೇಟಿಂಗ್ ವ್ಯವಸ್ಥೆಯನ್ನು ಮಾರ್ಪಾಡು ಮಾಡುವತ್ತ ಸಂಶೋಧಕರು ಗಮನ ಹರಿಸಿದ್ದಾರೆ
--------------------------------------------------
ಕೀಟ ಸೈಬೋರ್ಗುಗಳು:ಹುಡುಕಾಟಕ್ಕೆ ಬಳಕೆ


ಅಪಾಯಕಾರಿ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದವರನ್ನು ಪತ್ತೆ ಹಚ್ಚಿ,ಅವರಿಗೆ ನೆರವಾಗಲು ಕೀಟಗಳನ್ನು ಬಳಸಲು ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಕೀಟಗಳ ಸಣ್ಣ ದೇಹ,ಗಾಳಿಯನ್ನು ನುಗ್ಗಿ ಮುಂದೆ ಸಾಗಲು ಅನುವು ಮಾಡುವ ಆವುಗಳ ಎರೋಡೈನಾಮಿಕ್ ವಿನ್ಯಾಸ ಸಂಶೋಧಕರ ಗಮನ ಸೆಳೆದಿವೆ.ಕೀಟಗಳ ದೇಹದಲ್ಲಿ ಇಲೆಕ್ಟ್ರೋಡುಗಳನ್ನು ಅಳವಡಿಸಿ,ಸೈಬೋರ್ಗುಗಳಾಗಿಸಿ,ಅವನ್ನು ನಿಯಂತ್ರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ಅವುಗಳ ದೇಹದ ಮೇಲೆ ಕ್ಯಾಮರಾ,ಸಂವೇದಕಗಳನ್ನು ಅಳವಡಿಸಿ,ಶೋಧ ಕಾರ್ಯದಲ್ಲಿ ಬಳಸಲು ಅವರು ಯೋಜಿಸಿದ್ದಾರೆ.ಸಾಧನಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಹೇಗೆ ಎನ್ನುವುದು ಅವರ ತಲೆ ತಿನ್ನುತ್ತಿರುವ ಸಮಸ್ಯೆ.ಇದಕ್ಕೆ ಸೌರ ವಿದ್ಯುತ್ ಅನ್ನು ಬಳಸುವುದು ಅವರಿಗೆ ಬೇಕಿಲ್ಲ.ಹಾಗೆ ಮಾಡಿದರೆ,ಅದು ಸುತ್ತ ಬೆಳಕು ಇದ್ದಾಗ ಮಾತ್ರಾ ಶಕ್ತಿ ಉತ್ಪಾದಿಸುತ್ತದೆ,ಹಾಗಾಗಿ ಅವುಗಳ ಬಳಕೆ ಬಗ್ಗೆ ಸಂಶೋಧಕರಿಗೆ ಉತ್ಸಾಹವಿಲ್ಲ.ಕೀಟಗಳ ರೆಕ್ಕೆಗಳ ಚಲನೆ ಮತ್ತು ಶಕ್ತಿಯನ್ನು ಬಳಸಿ ಶಕ್ತಿ ಉತ್ಪಾದಿಸುವತ್ತ ಅವರ ಗಮನ ಹರಿದಿದೆ.ಪೀಜೋ ಇಲೆಕ್ಟ್ರಿಕ್ ಪರಿಣಾಮ ಮತ್ತು ಥರ್ಮೋ ಇಲೆಕ್ಟ್ರಿಕ್ ಪರಿಣಾಮಗಳನ್ನು ಬಳಸಿ ವಿದ್ಯುಚ್ಛಕ್ತಿ ಬಳಸುವತ್ತ ಸಂಶೋಧನೆ ಮುಂದುವರಿದಿದೆ.ಕೊಳವೆಯಾಕಾರದ ವಿದ್ಯುಜ್ಜನಕವು 0.2ಗ್ರಾಮ್ ತೂಗಿ,45ಮೈಕ್ರೋವ್ಯಾಟ್ ಶಕ್ತಿ ಉತ್ಪಾದಿಸಲು ಶಕ್ತವಾಗಿದೆ.ಹಿಂದೆಯೂ ಸಂಶೋಧಕರು ಇಲಿ,ಮೀನುಗಳನ್ನು ಸೈಬೋರ್ಗ್‍ಗಳಾಗಿಸಲು ಪ್ರಯತ್ನಿಸಿದ್ದಿದೆ.ಇಲೆಕ್ಟ್ರೋಡುಗಳ ಮೂಲಕ ಅವುಗಳ ಮಿದುಳಿಗೆ ಸಂವೇದನೆ ನೀಡಿ,ಆ ಮೂಲಕ ಅವನ್ನು ಬೇಕಿದ್ದಲ್ಲಿಗೆ ಹೋಗುವಂತೆ ಮಾಡಿ,ಅವನ್ನು ರಕ್ಷಣಾ ಕಾರ್ಯಗಳಲ್ಲಿ ಬಳಸಲು ಪ್ರಯತ್ನಿಸಲಾಗಿತ್ತು.
-----------------------------------
ಜನಪ್ರಿಯವಾಗದ ಸೇವೆಗಳು:ಗೂಗಲ್ ಎಳ್ಳುನೀರು

ಗೂಗಲ್ ಕಂಪೆನಿಯು ಹೊಸ ಹೊಸ ಸೇವೆಗಳನ್ನು ಆರಂಭಿಸುತ್ತಾ,ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.ಈ ಪ್ರಯತ್ನದಲ್ಲಿ ಅದಕ್ಕೆ ಯಶಸ್ಸು ಸಿಕ್ಕಿರುವುದು ಆಗೊಮ್ಮೆ ಈಗೊಮ್ಮೆ ಮಾತ್ರಾ.ಹಲವು ಉತ್ಪನ್ನಗಳು ಜನಮನ್ನಣೆ ಗಳಿಸಿಕೊಳ್ಳಲು ವಿಫಲವಾಗಿ ಮೂಲೆಗುಂಪಾಗಿವೆ.ಅಂತಹ ಹಲವು ವಿಫಲ ಯೋಜನೆಗಳಿಗೆ ಗುಡ್‌ಬೈ ಹೇಳಿ,ತನ್ನ ಸೇವೆಯನ್ನು ಸೀಮಿತಗೊಳಿಸಿ,ಗುಣಮಟ್ಟದ ಸೇವೆ ನೀಡಲು ಗೂಗಲ್ ಪ್ರಯತ್ನಿಸಲಿದೆ.ಗೂಗಲ್ ವೇವ್,ಬಜ್,ನೋಟ್‌ಬುಕ್,ಗೂಗಲ್ ಬುಕ್‌ಮಾರ್ಕ್,ಗೂಗಲ್ ಫ್ರೆಂಡ್ ಕನೆಕ್ಟ್,ಗೂಗಲ್ ಸರ್ಚ್ ಟೈಮ್‌ಲೈನ್,ನೋಲ್,ಕಲ್ಲಿದ್ದಲಿಗಿಂತ ಅಗ್ಗದ ನವೀಕರಿಸಬಹುದಾದ ಇಂಧನ ಯೋಜನೆ ಇವೆಲ್ಲವೂ ಗೂಗಲ್ ಕೈ ಬಿಡಲಿರುವ ಯೋಜನೆಗಳು.ಇವುಗಳ ಪೈಕಿ ನೋಲ್ ಎನ್ನುವುದು ವಿಕಿಪೀಡಿಯಾದಂತಹ ವಿಶ್ವಕೋಶ ಯೋಜನೆಯಾಗಿತ್ತು.ಗೂಗಲ್ ವೇವ್ ಎನ್ನುವುದು ಆನ್‌ಲೈನ್ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಿದ ಸೇವೆ.ಬಜ್ ಪೇಸ್‌ಬುಕ್ ಹಾಗೆ ಸಾಮಾಜಿಕ ಜಾಲತಾಣ.ಇನ್ನು ಮುಂದೆ ಹೊಸ ಸೇವೆ ಅಥವಾ ಉತ್ಪನ್ನಗಳನ್ನು ಆರಂಭಿಸುವ ಮುನ್ನ ಹೆಚ್ಚು ಜಾಗ್ರತೆ ವಹಿಸುವುದಾಗಿ ಕಂಪೆನಿ ಹೇಳಿಕೊಂಡಿದೆ.ಆಪಲ್ ಅಂತಹ ಕಂಪೆನಿಗಳು ಅಪರೂಪವಾಗಿ ಮಾತ್ರಾ ಹೊಸ ಸೇವೆಗಳನ್ನು ಅಳೆದು-ಸುರಿದು ಎನ್ನುವಂತೆ ಪ್ರಕಟಿಸುತ್ತವೆಗೂಗಲ್ ಆದರೋ ನಿಯಮಿತವಾಗಿ ಇಂತಹ ಸೇವೆಗಳನ್ನು ಪ್ರಕಟಿಸುತ್ತಾ ಬಂದಿದೆ.ಹಲವು ಸೇವೆಗಳು ಆರಂಭಿಕವಾಗಿ ಗುಲ್ಲೆಬ್ಬಿಸಿದರೂ,ದಿನ ಕಳೆದಂತೆ ಜನಮನದಿಂದ ದೂರವಾಗುತ್ತಿದ್ದುವು.ಮುಚ್ಚಲು ನಿರ್ಧರಿಸಿದ ಸೇವೆಗಳಲ್ಲಿ ಗೂಗಲ್+ ಸೇರಿಲ್ಲ.ಇದಕ್ಕೆ ನೂರು ದಿನಗಳಲ್ಲಿ ಹತ್ತು ನಾಲ್ಕು ದಶಲಕ್ಷ  ಬಳಕೆದಾರರು ನೋಂದಾಯಿಸಿಕೊಂಡಿದ್ದರು.ಅರ್ಕುಟ್ ಕೂಡಾ ಮುಂದುವರಿದಿದೆ.
----------------------------------------------------------------
ಆಧಾರ್:ಸಚಿವ ಸಂಪುಟ ಅನುಮೋದನೆ ಲಭಿಸಿಲ್ಲ!
ಪ್ರತಿ ಭಾರತೀಯನ ಜೈವಿಕ ಚಹರೆಯನ್ನು ಸಂಗ್ರಹಿಸಿ,ಆತನಿಗೆ ಪ್ರತ್ಯೇಕ ಆಧಾರ್ ಸಂಖ್ಯೆಯನ್ನು ನೀಡುವ ಆಧಾರ್ ಯೋಜನೆಗೆ ಅಂಗೀಕಾರ ನೀಡುವ ಪ್ರಸ್ತಾಪ ಕೇಂದ್ರ ಸಚಿವ ಸಂಪುಟದ ಮೂಂದೆ ಬಂದಿಲ್ಲವಂತೆ.ಈ ಬಗ್ಗೆ ಕೇಂದ್ರ ಸಚಿವ ಚಿದಂಬರಂ ಪ್ರಧಾನ ಮಂತ್ರಿಯವರ ಗಮನ ಸೆಳೆದಿದ್ದಾರೆ.ಆಧಾರ್ ಯೋಜನೆಯ ಅನುಷ್ಠಾನ ಜಾರಿಯಲ್ಲಿದ್ದು,ಹಲವು ರಾಜ್ಯಗಳಲ್ಲಿ ಆಧಾರ್ ಸಂಖ್ಯೆಯನ್ನು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.ಭಾರತದ ರಿಜಿಸ್ಟರ್ಡ್ ಜನರಲ್ ಅವರು ಮಾತ್ರಾ ಭಾರತೀಯರ ಜೈವಿಕ ಚಹರೆಯನ್ನು ಸಂಗ್ರಹಿಸಿ,ಅವರಿಗೆ ಗುರುತು ಪತ್ರ ನೀಡುವ ಅಧಿಕಾರ ಹೊಂದಿದ್ದಾರೆ.ಈಗ ಆಧಾರ್ ಯೋಜನೆಯಲ್ಲಿ ಅದೇ ಕೆಲಸ ನಡೆಯುತ್ತಿದ್ದು,ರಾಜ್ಯಗಳು ಯಾವ ಗುರುತು ಸಂಖ್ಯೆಗೆ ಮಾನ್ಯತೆ ನೀಡಬೇಕೆಂದು ಗಲಿಬಿಲಿಗೊಂಡಿವೆ.ಅದಲ್ಲದೆ ಹಲವೆಡೆ ಆಧಾರ್ ಯೋಜನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಜನಗಣತಿಯ ಸಂಖ್ಯೆ ಜತೆ ತಾಳೆಯಾಗುತ್ತಿಲ್ಲವಂತೆ.ಉದಾಹರಣೆಗೆ ಹೈದರಾಬಾದಿನ ಅಂಬರ್‌ಪೇಟೆಯಲ್ಲಿ ಜನಗಣತಿಯಲ್ಲಿ ಹದಿನೈದು ಸಾವಿರ ಜನ ಲೆಕ್ಕಕ್ಕೆ ಸಿಕ್ಕಿದ್ದರೆ,ಆಧಾರ್ ಪ್ರಕಾರ ಅದು ಇಪ್ಪತ್ತೊಂದು ಸಾವಿರ.ಹಾಗೆಯೇ ಸೆಕುಂದರಾಬಾದಿನಲ್ಲಿ ಆಧಾರ್ ಯೋಜನೆಯಡಿ ಮೂವತ್ತೇಳು ಸಾವಿರ ಜನ ಗುರುತಿಸಿಕೊಂಡಿದ್ದಾರೆ-ಆದರೆ ಗಣತಿಯ ಪ್ರಕಾರ ಅಲ್ಲಿದ್ದದ್ದು ಹದಿಮೂರು ಸಾವಿರ ಜನರು ಮಾತ್ರಾ.ಈ ವೈಪರೀತ್ಯಗಳಿಗೆ ಕಾರಣವೇನು ಎನ್ನುವುದು ಚೋದ್ಯದ ವಿಷಯ.
--------------------------------------------
ವೆಬ್‌ಕ್ಯಾಮ್ ಮೂಲಕ ಟೈಲರಿಂಗ್
ಅಂತರ್ಜಾಲ ತಾಣಗಳ ಮೂಲಕ ಖರೀದಿಸುವ ಇ-ವಾಣಿಜ್ಯ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.ಅದರಲ್ಲೂ ಯುವಜನರು ಇದರಲ್ಲಿ ಮುಂದಿದ್ದಾರೆ.ಆದರೆ ಉಡುಪುಗಳ ಖರೀದಿಗೆ ಇ-ವಾಣಿಜ್ಯ ತುಸು ತಾಪತ್ರಯದ್ದೇ.ವೆಬ್‌ಸೈಟಿನಲ್ಲಿ ಲಭ್ಯವಿರುವ ಉಡುಪು ತನ್ನ ಅಳತೆಗೆ ಹೊಂದುತ್ತದೆಯೇ ಎನ್ನುವುದನ್ನು ಪರಿಶೀಲಿಸುವುದು ಕಷ್ಟದ ಕೆಲಸ.ಈಗ ಅದಕ್ಕೂ ಆನ್‌ಲೈನ್ ಪರಿಹಾರವಿದೆ.ವೆಬ್‌ಕಾಮ್ ಮುಂದೆ ಗ್ರಾಹಕ ವಿವಿಧ ಭಂಗಿಯಲ್ಲಿ ಪೋಸು ನೀಡಿದರೆ,ತಂತ್ರಾಂಶವೊಂದು,ಆತನ ಅಳತೆಯನ್ನು ತೆಗೆದುಕೊಳ್ಳುತ್ತದೆ.ವೆಬ್‌ಸೈಟಿನ ಉಡುಪು ಆ ಅಳತೆಯದ್ದೇ ಎನ್ನುವುದನ್ನು ಗ್ರಾಹಕ್ ಅತಿಳಿದುಕೊಳ್ಳಬಹುದು.ಹಾಗೆಯೆ ಆತನಿಗೆ ಸೂಕ್ತ ಉಡುಪನ್ನು ಅಂತರ್ಜಾಲ ತಾಣ ಶಿಫ್ಹಾರ್ಸು ಮಾಡಲೂ ಬಹುದು.ರೊಬೋಟು ಪ್ರತಿಕೃತಿಗಳಿಗೆ ಉಡುಪನ್ನು ತೊಡಿಸಿ,ಅವು ಸೂಕ್ತವಾಗಿ ದೇಹಕ್ಕೆ ಹೊಂದುತ್ತದೆಯೋ ಎಂದೂ ನೋಡಬಹುದು.ಈ ರೊಬೋಟುಗಳ ಅಳತೆಯನ್ನು ಹೆಚ್ಚುಕಡಿಮೆ ಮಾಡಿ,ಗ್ರಾಹಕನ ಅಲತೆಯದ್ದಕ್ಕೆ ಉಡುಪು "ಫಿಟ್"" ಆಗುತ್ತದೋ ಎಂದೂ ಪರೀಕ್ಷಿಸಬಹುದು.ಪುಸ್ತಕ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ಆನ್‌ಲೈನಿನಲ್ಲಿ ನೂರಕ್ಕೆ ಇಪ್ಪತ್ತೈದು ಭಾಗದಷ್ಟು ಮಾರಾಟ ಆಗುತ್ತವೆ.ಒಟ್ಟು ಮಾರಾಟವಾಗುವ ಉಡುಪುಗಳ ಪೈಕಿ ಹತ್ತು ಶೇಕಡಾ ಮಾತ್ರಾ ಅಂತರ್ಜಾಲದ ಮೂಲಕ ಮಾರಾಟವಾಗುತ್ತವೆ.ಈ ಹೊಸ ಬೆಳವಣಿಗೆ ಇದನ್ನು ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಿದೆ.
-------------------------------------
ಪೇಸ್‌ಬುಕ್:ನಿಮಗೂ ಅವನಿಗೂ ಅಂತರವೆಷ್ಟು?
ಅಪರಿಚಿತ ವ್ಯಕ್ತಿಯೊಬ್ಬನನ್ನು ತೆಗೆದುಕೊಂಡರೆ,ನಿಮ್ಮ ಸ್ನೇಹಿತನ ಸ್ನೇಹಿತ,ಆ ಅಪರಿಚಿತ ವ್ಯಕ್ತಿಯ ಸ್ನೇಹಿತನನ್ನು ಬಲ್ಲವನಾಗಿರುತ್ತಾನೆ.ಅಂದರೆ ವ್ಯಕ್ತಿಗಳ ನಡುವಣ ಅಂತರ ನಾಲ್ಕು.ಸದ್ಯ ಫೇಸ್‌ಬುಕ್ಕಿನಲ್ಲಿ ಈ ಅಂತರ 3.74 ಎಂದು ಸಂಶೋಧಕರು ಅಂದಾಜಿಸಿದ್ದಾರೆ.ಭೂಮಿಯ ಜನರನ್ನು ತೆಗೆದುಕೊಂಡರೆ,ಈ ಅಂತರ ಆರು ಎನ್ನುವುದು ನಿಮಗೆ ತಿಳಿದಿರಬಹುದು.ಹಿಂದೆ ಈ ಅಂತರ ಹೆಚ್ಚಿತ್ತು.ಫೇಸ್‌ಬುಕ್ ಪ್ರತಿಯೋರ್ವ ಸದಸ್ಯನಿಗೂ ಹೆಚ್ಚೆಂದರೆ ಐದು ಸಾವಿರ ಗೆಳೆಯರನ್ನು ಹೊಂದಲು ಅವಕಾಶ ನೀಡುತ್ತದೆ.ಫೇಸ್‌ಬುಕ್ ಸದಸ್ಯರು ಪರಸ್ಪರ ಮಿತೃತ್ವವನ್ನು ಸಾಧಿಸಿದಂತೆಲ್ಲಾ ಈ ಅಂತರ ತಗ್ಗುತ್ತದೆ.ಆದರಿನ್ನು ಈ ಅಂತರ ತಗ್ಗುವ ಪ್ರಕ್ರಿಯೆ ನಿಧಾನವಾಗಲಿದೆ.

Udayavani


*ಅಶೋಕ್‌ಕುಮಾರ್ ಎ

Monday, November 21, 2011

ಅಂತರ್ಜಾಲದ ಮೂಲಕ ರೇಶನ್ ಕಾರ್ಡ್ ಅರ್ಜಿ






ಅಂತರ್ಜಾಲದ ಮೂಲಕ ರೇಶನ್ ಕಾರ್ಡ್ ಅರ್ಜಿ

ಕರ್ನಾಟಕ ಸರಕಾರವು ಪಡಿತರ ಕಾರ್ಡು ಬೇಕಾದವರು ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯತ್ತ ಹೆಜ್ಜೆ ಹಾಕಿದೆ.ಕಚೇರಿಗೆ ಹೋಗದೆ ಅರ್ಜಿ ಸಲ್ಲಿಸುವ ವ್ಯವಸ್ಥೆಗಳೇ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಹಾಯ ಮಾಡುತ್ತವೆ ಎನ್ನುವುದರ ಜತೆಗೆ,ಕಚೇರಿಗೆ ಅಲೆದಾಟವನ್ನೂ ತಪ್ಪಿಸುತ್ತದೆ.ಅರ್ಜಿಯ ವಿಲೇವಾರಿ ಬಗ್ಗೆಯೂ ಆನ್‌ಲೈನಿನಲ್ಲಿ ಪರೀಕ್ಷಿಸಬಹುದು ಎನ್ನುವುದು ಇನ್ನೊಂದು ಪ್ಲಸ್ ಪಾಯಿಂಟ್.ಸ್ವಂತ ಅಂತರ್ಜಾಲ ಸಂಪರ್ಕ,ಕಂಪ್ಯೂಟರ್ ವ್ಯವಸ್ಥೆ ಹೊಂದಿದ್ದವರು ಇಂತಹ ವ್ಯವಸ್ಥೆಗಳಿಂದ ಹೆಚ್ಚು ಲಾಭ ಪಡೆಯುತ್ತಾರೆ.ಒಂದು ವೇಳೆ ಸೈಬರ್ ಕೆಫೆಗಳನ್ನು ಬಳಸಬೇಕಾದರೂ,ಕಚೇರಿಗೆ ಹೋಗಿ ಬರಲು ತಗಲುವ ವೆಚ್ಚವನ್ನು ಸೈಬರ್ ಕೆಫೆಗೆ ಪಾವತಿಸ ಬೇಕಾದೀತು.ಪಡಿತರ ನೀಡಿಕೆಯ ವೇಳೆ ಅಂತಿಮವಾಗಿ ದಾಖಲೆಗಳ ಪರಿಶೀಲನೆ ನಡೆಯುವ ಕಾರಣ,ಅರ್ಜಿಯ ಜತೆಗೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾದ ಪ್ರಮೇಯವೂ ಇಲ್ಲ.ಅನಿಲ ಸಂಪರ್ಕದ ಆನ್‌ಲೈನ್ ದೃಡೀಕರಣದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಪ್ರಯೋಗ ನಡೆಯುತ್ತಿದೆ.
---------------------------------------
ಐಸ್‍ಕ್ರೀಮ್ ಸ್ಯಾಂಡ್‌ವಿಚ್‌ಗಾಗಿ ಮುಗಿಬಿದ್ದವರು!
 ಆಂಡ್ರಾಯಿಡ್ ನಾಲ್ಕು ಆವೃತ್ತಿಗೆ ಗೂಗಲ್ ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಎಂದು ಹೆಸರಿಸಿದೆ.ಹೀಗಾಗಿ ಈಗ ಎಲ್ಲರಿಗೂ ತಮ್ಮ ಪೋನಿನಲ್ಲಿ  ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಪಡೆಯುವ ತವಕ.ಹಳೆಯ ಫೋನ್ ಇದ್ದವರು ಹೊಸ ಆವೃತ್ತಿಯನ್ನು ಅಳವಡಿಸಬೇಕಾಗುತ್ತದೆ.ಹಾಗೆ ಮಾಡುವಾಗ,ಹೊಸ ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಬಯಸುವ ಯಂತ್ರಾಂಶಗಳು ಸ್ಮಾರ್ಟ್‌ಪೋನಿನಲ್ಲಿ ಹೊಂದಿದ್ದರೆ,ಅದನ್ನು ಅಳವಡಿಸಿದರೆ ಅಡ್ದಿ ಇಲ್ಲ.ಇಲ್ಲವಾದರೆ ಅದರ ಅಳವಡಿಕೆ ಹೊಸ ತಾಪತ್ರಯಗಳನ್ನು ಹುಟ್ಟುಹಾಕಲೂ ಬಹುದು.ಒಂದು ವೇಳೆ ಸ್ಮಾರ್ಟ್‌ಫೋನು ಸೂಕ್ತವಾಗಿದ್ದು,ಅದರಲ್ಲಿ ಐಸ್‌ಸ್ಕ್ರೀಮ್ ಸ್ಯಾಂಡ್‌ವಿಚ್ ಅಳವಡಿಸಿದರೆ, ಅದು ಹೆಚ್ಚಿನ ದಕ್ಷತೆ,ಸುಗಮ ಕಾರ್ಯನಿರ್ವಹಣೆ ಮಾಡುವುದು ಖಾತರಿ.ಸ್ಮಾರ್ಟ್‌ಫೋನ್ ಬಳಕೆ  ಸುಲಲಿತವಾಗುವುದರಲ್ಲಿ ಸಂಶಯವೇ ಇಲ್ಲ.ಜತೆಗೇ ಹೆಚ್ಚು ಆಂಡ್ರಾಯಿಡ್ ತಂತ್ರಾಂಶಗಳನ್ನು ಬಳಸುವ ಅವಕಾಶ ಬೇರೆ ಸಿಗುತ್ತದೆ.
--------------------------------------

ಗೂಗಲ್ ಸಂಗೀತ
ಗೂಗಲ್ ಮ್ಯೂಸಿಕ್ ಸ್ಟೋರ್ ಅನ್ನು ಆರಂಬಿಸಿದೆ.ಇದರ ಮೂಲಕ ಹಾಡುಗಳು ಮತ್ತು ಸಂಗೀತ ಆಲ್ಬಮುಗಳ ಮಾರಾಟಕ್ಕೂ ಗೂಗಲ್ ಕೈಹಾಕಿದೆ.ಬಳಕೆದಾರರು ತಾವು ಖರೀದಿಸಿದ ಸಂಗೀತವನ್ನು ಕ್ಲೌದ್ ಸೇವೆಗಳ ಮೂಲಕ ದಾಸ್ತಾನು ಇಡಬಹುದು.ಗೂಗಲ್+ ಮೂಲಕ ತಮ್ಮ ಗೆಳೆಯರಿಗೆ ಸಂಗೀತವನ್ನು ಆನಂದಿಸಬಹುದು.ಪ್ರತಿ ಹಾಡು ಖರೀದಿಸಿದಾಗ,ಗೆಳೆಯರು ಒದಗಿಸಿದ ಒಂದು ಹಾಡನ್ನು ಡೌನ್‌ಲೋಡ್ ಮಾಡುವುದು ಉಚಿತವಾಗಿ ಸಾಧ್ಯವಾಗುತ್ತದೆ.ಹದಿಮೂರು ದಶಲಕ್ಷಗಳಷ್ಟು ಹಾದುಗಳ ಸಂಗ್ರಹ ಗುಗಲ್ ಹೊಂದಿದೆ.ಈ ಮೂಲಕ ಗೂಗಲ್ ಆಪಲ್ ಕಂಪೆನಿಯ
ಸಂಗೀತ ಮಾರಾಟಕ್ಕೆ ಸ್ಪರ್ಧೆ ಒಡ್ಡುವಂತಾಗಿದೆ.ಅಮೆಜಾನ್ ಪೇಸ್‌ಬುಕ್ ಮುಂತಾದ ತಾಣಗಳ ಜತೆಯೂ ಗೂಗಲ್ ಸ್ಪರ್ಧೆ ನೀಡುವಂತಾಗಿದೆ.
------------------------------------------
ಇಂಟೆಲ್ :ಹೊಸ ಚಿಪ್
ತೊಂಬತ್ತರ ದಶಕದ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ಮೂರು ಟ್ರಿಲಿಯನ್ ಲೆಕ್ಕಾಚಾರಗಳನ್ನು ಮಾಡಲು ಶಕ್ತವಾಗಿತ್ತು.ಆ ಸೂಪರ್ ಕಂಪ್ಯೂಟರ್ ವಿಶಾಲ ಸ್ಥಳಾವಕಾಶವನ್ನು ಬಯಸುವ ಕಂಪ್ಯೂಟರ್ ಆಗಿತ್ತು.ಈಗ ಇಂಟೆಲ್ ಕಂಪೆನಿಯು ಅಷ್ಟೇ ಸಾಮರ್ಥ್ಯದ ಚಿಪ್ ಅನ್ನು ಕೈಯಗಲದ ಸಾಧನದಲ್ಲಿ ಹಿಡಿಯುವಂತೆ ಅಭಿವೃದ್ಧಿ ಪಡಿಸಿದೆ.ಅಂಗೈಯಗಲದ ಸ್ಮಾರ್ಟ್‌ಫೋನ್ ಸಾಧನದಲ್ಲಿ ಪ್ರತಿ ಸೆಕೆಂಡಿಗೆ ಮೂರು ಟ್ರಿಲಿಯನ್ ಲೆಕ್ಕಾಚಾರಗಳು ನಡೆಯಬಹುದು.ಐವತ್ತಕ್ಕೂ ಹೆಚ್ಚು ಸಂಸ್ಕಾರಕಗಳು ಒಂದು ಚಿಪ್‌ನಲ್ಲಿ ಇರುವಂತೆ ಇಂಟೆಲ್ ಅಭಿವೃದ್ಧಿ ಪಡಿಸಿದೆ.
---------------------------
ಫೇಸ್‌ಬುಕ್ ಬಳಕೆದಾರ:ಹಣವರ್ಗಾವಣೆ ಸಾಧ್ಯ
ಫೇಸ್‌ಬುಕ್ ಬಳಕೆದಾರರು ಪರಸ್ಪರ ಹಣಸಂದಾಯ ಮಾಡಿಕೊಳುವುದು ಇನ್ನು ಬಹು ಸುಲಭ.ಪೇಪಾಲ್ ಈ ವ್ಯವಸ್ಥೆ ಮಾಡಿದೆ.ಸೆಂಡ್ ಮನಿ ಎನ್ನುವ ತಂತ್ರಾಂಶದ ಮೂಲಕ ಈ ಸೇವೆಯನ್ನು ಪಡೆಯಬಹುದು.ಈ ಸೇವೆಯೂ ಉಚಿತವಾಗಿ ಲಭ್ಯವಿದೆ ಹಣ ಸಂದಾಯದಲ್ಲಿ ಕಂಪೆನಿಗಳು ಬಂದರೆ,ಶುಲ್ಕ ನೀಡಬೇಕಾಗುತ್ತದೆ.ಹಣ ಕಳುಹಿಸುವಾಗ ಸಂದೇಶವನ್ನೂ ಕಳುಹಿಸಲು ಸಾಧ್ಯ.ಹಣ ವರ್ಗಾವಣೆ ಜತೆಗೆ ಗ್ರೀಟಿಂಗ್ ಕಾರ್ಡುಗಳ ವಿನಿಮಯದ ಆಯ್ಕೆಯೂ ಲಭ್ಯವಿದೆ.ಪೇಪಾಲ್ ಈ ಮೂಲಕ ಜಗತ್ತಿನ ಅತಿ ದೊಡ್ಡ ಸಮುದಾಯದ ನಡುವೆ ಹಣ ವಿನಿಮಯ ಕೆಲಸವನ್ನು ನಿಮಿಷಗಳಲ್ಲೇ ಮಾಡಲು ಅವಕಾಶ ಒದಗಿಸಿದೆ.
------------------------------------------------
ಕಂಬಿ ಇಲ್ಲದ ರೈಲು?
ರೈಲು ಕಂಬಿಗಳ ಮೇಲೆ ಓಡುವುದು ತಾನೇ? ರೈಲು ಚಾಲೂ ಆಗಿ ಇನ್ನೂರು ವರ್ಷಗಳೇ ಕಳೆದರೂ,ಕಂಬಿಯ ಮೇಲೆ ಓಡುವ ರೈಲಿನ ಚರಿತ್ರೆ ಹಿಂದಿನ ಹಾಗೇ ಮುಂದುವರಿದಿದೆ.ಅದಿನ್ನು ಬದಲಾದರೂ ಅಚ್ಚರಿಯಿಲ್ಲ.ನೋಡಲು ವಿಮಾನದಂತೆ ಕಾಣಿಸುವ ಸಾಧನವನ್ನು ಜಪಾನಿನ ತೊಹುಕು ವಿಶ್ವವಿದ್ಯಾಲಯದವರು ತಯಾರಿಸಿದ್ದಾರೆ.ಅದು ಭೂಮಿಯಿಂದ ಕೇವಲ ಕೆಲವೇ ಸೆಂಟಿಮೀಟರ್ ಅಂತರದಲ್ಲಿ ಓಡುತ್ತದೆ.ಹೀಗಾಗಿ,ಅದು ಓಡುವಾಗ ಭೂಮಿಯ ಮೇಲ್ಮೈ ಜತೆ ಯಾವುದೇ ಘರ್ಷಣೆ ಇಲ್ಲದೆ,ಬಹು ಸುಲಭವಾಗಿ ಓಡುತ್ತದೆ.ಸದ್ಯ ಇದರ ಮಾದರಿ ಮಾತ್ರ ತಯಾರಾಗಿದೆ ಆದರೆ ನೆಲಕ್ಕೆ ತಾಕದೆ ಓಡುವ ರೈಲುಗಳಿದೀಗಲೇ ಇವೆ.ಚೀನಾದ ಮಗಲೇವ್ ಟ್ರೈನುಗಳು ಇಂತಹುವು.ಅವುಗಳು ಪ್ರತಿ ಗಂಟೆಗೆ  ಆರು ನೂರರ ಸಮೀಪದ ವೇಗದಲ್ಲಿ ಚಲಿಸಬಲ್ಲುವು.ಲ್ಯಾವಿಟೇಶನ್ ಎನ್ನುವ ತತ್ವದ ಮೇಲವು ಕೆಲಸ ಮಾಡುತ್ತವೆ.ಚೀನಾ,ಜಪಾನ್,ಇಂಗ್ಲೆಂಡ್ ಈ ಎಲ್ಲಾ ದೇಶಗಳೂ ಅತಿ ವೇಗದ ರೈಲ್ವೇ ಜಾಲಗಳನ್ನು ನಿರ್ಮಿಸಲು ಆಸಕ್ತಿ ಹೊಂದಿದ್ದು,ಇವಕ್ಕೆ ಸೂಕ್ತವಾದ ತಂತ್ರಜ್ಞಾನ ಯಾವುದು ಎನ್ನುವುದೇ ಸದ್ಯ ಬಗೆ ಹರಿಯಬೇಕಾದ ಅಂಶವಾಗಿದೆ.ಚಾಲಕರಹಿತ ರೈಲ್ವೇ ವ್ಯವಸ್ಥೆಗಳೂ ಚಾಲ್ತಿಯಲ್ಲಿವೆ ಸಿಂಗಾಪುರಿನ ಭೂಗತ ರೈಲ್ವೇಯಲ್ಲಿ ಚಾಲಕನಿಲ್ಲದೆ ರೈಲು ಓಡುತ್ತದೆ.ಆದರೂ ಇವುಗಳಲ್ಲಿ ಅಳವಡಿಸಲಾದ ಸುರಕ್ಷಾ ವ್ಯವಸ್ಥೆಗಳು ರೈಲ್ವೇ ಪ್ರಯಾಣವನ್ನು ಸುರಕ್ಷಿತವಾಗಿ ಮಾಡುತ್ತವೆ.
---------------------------------------------
ಹಗುರ ವಸ್ತು
ಕೂದಲಿಗಿಂತಲೂ ಸಾವಿರ ಪಟ್ಟು ತೆಳ್ಳಗಿನ ವಸ್ತುವಿನ ಪದರವನ್ನು ಸೃಷ್ಟಿಸಿರುವ ಸಂಶೋಧಕರು ಈ ವಸ್ತು ಭೂಮಿಯ ಅತಿ ಹಗುರವಾದ ವಸ್ತು ಎಂದು ಘೋಷಿಸಿದ್ದಾರೆ.ಬರೇ 0.01% ಪ್ರತಿಶತ ಅಂಶ ವಸ್ತುವಿದ್ದು,ಉಳಿದೆಡೆ ಗಾಳಿಯ ಅಂಶವಿದೆ.ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ ,ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಎಚ್ ಆರೆಲ್ ಎನ್ನುವ ಸಂಶೋಧನಾಲಯಗಳು ಜತೆ ಸೇರಿ,ಈ ಹಗುರ ವಸ್ತುವನ್ನು ಸ್ರುಷ್ಟಿಸಿವೆ.ಹಗುರವಾದರೂ ಇದು,ಬಹು ದೃಡವಾಗಿದೆ.ಅದನ್ನು ಅರ್ಧಾಂಶ ಬಗ್ಗಿಸಿದರು ಅದು ತನ್ನ ಮೊದಲ ಸ್ಥಿತಿಗೆ ಮರಳುವಷ್ಟು ಸಾಮರ್ಥ್ಯವನ್ನು ಪಡೆದಿದೆ.ಇದನ್ನು ಹೇಗೆ ಬಳಸಬಹುದೆಂಬ ಬಗ್ಗೆ ಯಾವ ಮಾಹಿತಿಯೂ ಲಭ್ಯವಿಲ್ಲ.
--------------------------------------------
ವಿಕಿಪೀಡಿಯಾ ಮತ್ತು ಭಾರತ
ಭಾರತದಂತದಲ್ಲಿರುವ ಜನಸಂಖ್ಯೆಯೇ ವಿಕಿಪೀಡಿಯಾದಂತಹ ವಿಶ್ವಕೋಶವು ಬೆಳೆಯಲು ಹೆಚ್ಚು ನೆರವಾದೀತು ಎನ್ನುವುದು ವಿಕಿಪೀಡಿಯಾ ಸಹಸಂಸ್ಥಾಪಕ ಜಿಮ್ಮಿವೇಲ್ಸ್ ಅವರ ಲೆಕ್ಕಾಚಾರ.ಆದರೆ ಸದ್ಯಕ್ಕಂತೂ ಹಾಗಾಗುತ್ತಿಲ್ಲ.ಹಿಂದಿಯಂತಹ ಭಾಷೆಯನ್ನು ಬಳಸುವವರ ಸಂಖ್ಯೆಗೆ ಹೋಲಿಸಿದರೆ,ಹಿಂದಿ ವಿಕಿಪೀಡಿಯಾದಲ್ಲಿರುವ ಅರುವತ್ತು ಸಾವಿರ ಬರಹಗಳ ಸಂಖ್ಯೆ ಸಣ್ಣದೇ.ಯಾವುದೇ ಪದಗುಚ್ಛದ ಶೋಧ ನಡೆಸಿದರೂ ವಿಕಿಪೀಡಿಯಾದ ಕೊಂಡಿಯೇ ಮೊದಲಾಗಿ ಬರುವಷ್ಟು ವಿಕಿಪೀಡಿಯಾ ಜನಪ್ರಿಯ.ಈ ಜನಪ್ರಿಯತೆಯೇ ಇದಕ್ಕೆ ಮುಳುವಾಗಿದೆ.ವಿಕಿಪೀಡಿಯಾದ ಮಾಹಿತಿಗಳು ನಿಖರ ಎಂದು ಜನ ನಂಬುವರೆಂದು,ಅದಕ್ಕೆ ಸುಳ್ಳು ಸುಳ್ಳೇ ಮಾಹಿತಿಯನ್ನು ಸೇರಿಸುವವರೂ ಇದ್ದಾರೆ.ಅಂತಹ ಮಾಹಿತಿಗಳು ಸೇರ್ಪಡೆಯಾಗದಂತೆ ಎಚ್ಚರ ವಹಿಸುವ ವ್ಯವಸ್ಥೆಗಳೂ ವಿಕಿಪೀಡಿಯಾದಲ್ಲಿ ಇವೆ.ಸದ್ಯ ಭಾರತದಲ್ಲಿ ವಿಕಿಪೀಡಿಯಾದ ಬಗ್ಗೆ ಸಮಾವೇಶ ನಡೆಯುತ್ತಿದೆ.ಅದರಲ್ಲಿ ಭಾಗವಹಿಸಲು ಜಿಮ್ಮಿವೇಲ್ಸ್ ಭಾರತದಲ್ಲಿದ್ದಾರೆ.ಮುಂಬೈಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಅರುನೂರು ಜನ ಭಾಗವಹಿಸುತ್ತಿದ್ದಾರೆ.

ಅಶೋಕ್‌ಕುಮಾರ್ ಎ

UDAYAVANI

Monday, November 14, 2011

ಮರುಬಳಕೆ:ಟಾಪ್ ಯಾರು?


ಮರುಬಳಕೆ:ಟಾಪ್ ಯಾರು?

ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್‌ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವಸ್ತುಗಳನ್ನು ಸ್ವೀಕರಿಸುತ್ತದೆ. ಮರುಬಳಕೆ ಸಾಮಗ್ರಿ ಮರಳಿಸಿದ ಬಳಿಕ,ಯಂತ್ರದ ಸ್ಪರ್ಶಸಂವೇದಿ ತೆರೆಯಲ್ಲಿ  ತಮ್ಮ ಸೆಲ್‌ಫೋನ್ ನಂಬರ್ ನೀಡಿದರೆ,ಯಂತ್ರವು,ಆತನ ವಿವರಗಳನ್ನು ಅಂತರ್ಜಾಲ ಪುಟವೊಂದರಲ್ಲಿ ಪ್ರದರ್ಶಿಸ ತೊಡಗುತ್ತದೆ,ವ್ಯಕ್ತಿ ಎಷ್ತು ಐಟಮುಗಳ ಮರುಬಳಕೆಗೆ ಕಾರಣನಾಗಿದ್ದಾನೆ ಎನ್ನುವ ವಿವರಗಳಿಲ್ಲಿ ಸಿಗುತ್ತವೆ.ಮಾತ್ರವಲ್ಲದೆ ಹೆಚ್ಚು ಮರುಬಳಕೆ ಮಾಡಿದವರಿಗೆ ಬಹುಮಾನಗಳು ಮತ್ತು ಪ್ರೋತ್ಸಾಹಧನ ಇಲ್ಲಿ ಸಿಗುತ್ತದೆ.ಗ್ರೀನ್‌ಬೀನ್ ರಿಸೈಕಲ್ ಎನ್ನುವ ಕಂಪೆನಿಯ ಹೊಸ ಯೋಜನೆ ಇದಾಗಿದೆ.ಇದರ ಹೊಸತನಕ್ಕೆ ಶಿಕ್ಷಣಸಂಸ್ಥೆಯೊಂದು ಪ್ರಶಸ್ತಿಯನ್ನೂ ನೀಡಿದೆ.ಸದ್ಯ ಈ ಯಂತ್ರ ಹದಿನಾಲ್ಕು ಸಾವಿರ ಮರುಬಳಕೆಯ ವಸ್ತುಗಳನ್ನು ಒಟ್ಟು ಮಾಡಿದೆ. ಯಾವುದೇ ಬಹುಮಾನ ಅಥವಾ ಪ್ರೋತ್ಸಾಹ ಧನ ಸಂಬಂಧಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆಯೂ ಇಲ್ಲಿದೆ.
--------------------
ನಕ್ಷತ್ರವಾಗದ ಅನಿಲರಾಶಿ
ಭೂಮಿಯಿಂದ ಹನ್ನೆರಡು ಜ್ಯೋತಿರ್ವರ್ಷ ದೂರದಲ್ಲಿ ಹೀಲಿಯಂ,ಜಲಜನಕದ ಶುದ್ಧ ಅನಿಲರಾಶಿಯನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ.ಸಾಮಾನ್ಯವಾಗಿ ಇಂತಹ ಅನಿಲರಾಶಿಯಲ್ಲಿ ಭಾರದ ಧಾತುಗಳಾದ ಇಂಗಾಲ.ಸಿಲಿಕಾನ್ ಇತ್ಯಾದಿಗಳು ಕಾಣಬರುತ್ತವೆ.ವಿಶ್ವವು ಆಸ್ತಿತ್ವಕ್ಕೆ ಬಂದಾಗ ನಡೆದ ಭಾರೀ ಸ್ಫೋಟದಲ್ಲಿ ಅನಿಲರಾಶಿಗಳು ಬೇರ್ಪಟ್ಟು,ನಕ್ಷತ್ರ,ಗ್ರಹಗಳು ಆಸ್ತಿತ್ವಕ್ಕೆ ಬಂದುವು ಎನ್ನುವ ವಾದವಿದೆ.ಈಗ ಕಂಡು ಬಂದಿರುವ ಅನಿಲ ರಾಶಿಯಲ್ಲಿ ಹೀಲಿಯಂ ಮತ್ತು ಜಲಜನಕ ಬಿಟ್ಟರೆ ಬೇರೆ ಧಾತುಗಳ ಕುರುಹು ಕಂಡು ಬಾರದ್ದು ಆಶ್ಚರ್ಯ ಹುಟ್ಟಿಸಿದೆ.ಅನಿಲರಾಶಿಗಳು ತಣಿದು ನಕ್ಷತ್ರವಾಗಲು ಇತರ ಧಾತುಗಳು ಬೇಕೇಬೇಕು.ಇದರ ಶುದ್ಧತೆಗೆ ಕಾರಣವೇನು,ಇದು ನಕ್ಷತ್ರವಾಗಿ ಬದಲಾಗುವ ಪ್ರಕ್ರಿಯೆ ಯಾಕಾಗಿ ನಡೆಯುತ್ತಿಲ್ಲ ಎನ್ನುವುದ್ ಚೋದ್ಯದ ಸಂಗತಿಯಾಗಿದೆ.
---------------------------
4ಜಿ: ಗ್ರಾಹಕನಿಗೇನು ಕಾದಿದೆ?
ವಿದೇಶಗಳಲ್ಲೀಗ 4ಜಿ ಸೇವೆಗಳು ಆರಂಭವಾಗುತ್ತಲಿವೆ.3ಜಿ ಸೇವೆಗಳ ನಂತರ 4ಜಿ ಸೇವೆಗಳನ್ನು ಆರಂಭಿಸುವಾಗ,ಸೇವಾದಾತೃಗಳು ಮೂಲಸೌಕರ್ಯದಲ್ಲಿ ಬಹಳ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಕಾರಣ,ಬಹಳ ಹೂಡಿಕೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಅಲ್ಲದೆ ಸ್ಪೆಕ್ಟ್ರಮ್ ಪಡೆಯಲು ಲೈಸೆನ್ಸ್ ಶುಲ್ಕ ಇತ್ಯಾದಿ ಪಾವತಿಗಳನ್ನೂ ಮಾಡುತ್ತಾರೆ.ಹೀಗಾಗಿ,ಸೇವಾದಾತೃಗಳು ತಮ್ಮ ಹೂಡಿಕೆಯು ಬಹಳ ಬೇಗ ವಸೂಲಾಗ ಬೇಕೆಂಬ ನಿರೀಕ್ಷೆಯಲ್ಲಿರುವುದು ಸಾಮಾನ್ಯ.ಹೊಸ ಸೇವೆಗಳ ಮೂಲಕ ಜನರನ್ನು ಆಕರ್ಷಿಸಿ,ಅದರ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯತ್ನಿಸುವುದು ಒಂದು ಬಗೆ.4ಜಿಯಲ್ಲಿ ದತ್ತಾಂಶ ಅಧಾರಿತ ಸೇವೆಗಳಿಗೆ ಇನ್ನಷ್ಟು ಒತ್ತು ಸಿಗಲಿವೆ.ಶರವೇಗದ ಜಾಲವಿದಾದ್ದರಿಂದ,ದತ್ತಾಂಶ ಅಧಾರಿತ ಸೇವೆಗಳು 3ಜಿ ಜಾಲಕ್ಕಿಂತಲೂ ಇಲ್ಲಿ  ಗ್ರಾಹಕನಿಗೆ ಹೆಚ್ಚು ತೃಪ್ತಿದಾಯಕವಾಗ ಬಹುದು.ಟಿವಿ ವೀಕ್ಷಣೆಯನ್ನು ಹೆಚ್ಚಿಸುವಂತೆ ಗ್ರಾಹಕನ ಅಭ್ಯಾಸ ಬದಲಾಯಿಸುವಂತೆ ಮಾಡುವುದು ಸೇವಾದಾತೃಗಳ ಮುಖ್ಯ ಯೋಜನೆಯಾಗಿದೆ.ಧ್ವನಿ ಕರೆಗಳು 4ಜಿಯಲ್ಲೂ ಮುಂದುವರಿಯಲಿವೆ.ಗ್ರಾಹಕರ ಮಟ್ಟಿಗೆ ಧ್ವನಿ ಕರೆಗಳು ಯಾವ ಜಾಲದಲ್ಲೂ ಬೇಕಾದ ಪ್ರಧಾನ ಸೇವೆ.4ಜಿಯಲ್ಲಿ ಹೊಸ ತಂತ್ರಜ್ಞಾನದ ಮೂಲಕ ಇನ್ನಷ್ಟು ಸ್ಪಷ್ಟ ಕರೆಗಳನ್ನು ಏರ್ಪಡಿಸಲು ಅವಕಾಶ ಕಲ್ಪಿಸಿ,ಗ್ರಾಹಕನನ್ನು ಅಕರ್ಷಿಸುವುದು ಸೇವಾದಾತೃಗಳ್ಳ ಇನ್ನೊಂದು ಯೋಜನೆಯಾಗಿದೆ.ಗ್ರಾಹಕನ ಖಾಸಗಿ ವಿವರಗಳನ್ನು ಇತರರಿಗೆ ನೀಡಿ ಹಣ ಮಾಡುವುದೂ ಸಾಧ್ಯ-ಆದರೆ ಹೀಗೆ ಮಾಡಿದಾಗ,ಖಾಸಗಿತನದ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
------------------------------
ಮಕ್ಕಳು ಮತ್ತು ಆನ್‌ಲೈನ್:ಜಾಗ್ರತೆ ವಹಿಸಿ

ಸಾಮಾಜಿಕ ಜಾಲತಾಣಗಳ ಸದಸ್ಯರಾಗುವವರು ವಯಸ್ಕರಾಗಿರಬೇಕು.ಆದರೆ,ಫೇಸ್‌ಬುಕ್ ತಾಣದಲ್ಲಿ ಏಳೂವರೆ ದಶಲಕ್ಷ ಮಕ್ಕಳು ಸದಸ್ಯರಾಗಿದ್ದಾರೆ.ಕೆಲವು ಮಕ್ಕಳ ಹೆತ್ತವರೇ ಅವರನ್ನು ಇಲ್ಲಿ ಸೇರಿಸಲು ಮುತುವರ್ಜಿ ವಹಿಸುತ್ತಾರೆ.ಅಮ್ದರೆ ಹೆತ್ತವರು ಅಂತರ್ಜಾಲದಲ್ಲಿ ಮಕ್ಕಳ ಬಗ್ಗೆ ವಹಿಸ ಬೇಕಾಗಿರುವ ಎಚ್ಚರಿಕೆಯ ಬಗ್ಗೆ ಗಮನ ಕೊಡದಿರುವುದು ಸ್ಪಷ್ಟ.ಎರಡು ಮತ್ತು ಐದು ವರ್ಷ ನಡುವಿನ ವಯಸ್ಸಿನ ಮಕ್ಕಳು ಅಂತರ್ಜಾಲ ಬಳಸುವುದು ಎರಡು ವರ್ಷಗಳಲ್ಲಿ ಅತ್ಯಧಿಕವಾಗಿ ಬೆಳೆದಿದೆ.ವಿಡಿಯೋ ಆಟಗಳನ್ನು ಆಡುವ ಮಕ್ಕಳ ಸಂಖ್ಯೆಯೂ ಬಹು ದೊಡ್ಡದು.ಮಕ್ಕಳು ಅಂತರ್ಜಾಲ ಬಳಸುವಾಗ ಅವರು ತಮ್ಮ ವಿವರಳನ್ನು ನೀಡದಂತೆ ಅವರಿಗೆ ತಿಳುವಳಿಕೆ ನೀಡಬೇಕು.ಹಾಗೆಯೇ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವಾಗಲೂ ಎಚ್ಚರಿಕೆ ಬೇಕು-ಅವು ದುರ್ಬಳಕೆ ಆಗಲೂ ಬಹುದು.ಮಕ್ಕಳನ್ನು ಬೆದರಿಸುವ-ಸೈಬರ್ ಬುಲ್ಲಿ ಎನ್ನುವ ಸಮಸ್ಯೆ ಅಂತರ್ಜಾಲದಲ್ಲಿದೆ.ಇಂತಹುದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.ಮಕ್ಕಳು ಅಂತರ್ಜಾಲದಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎನ್ನುವ ಬಗ್ಗೆ ಕಣ್ಣಿಡಬೇಕು.ಅಂತರ್ಜಾಲವು ಚಟವಾಗಿ ಬಿಡುವ ಅಪಾಯದಿಂದ ಮಕ್ಕಳನ್ನು ರಕ್ಷಿಸುವುದಗತ್ಯ.
-------------------
ಬ್ಯಾಟರಿ ಖರ್ಚು:ಐಫೋನ್4S ಸಮಸ್ಯೆ ನಿವಾರಣೆ

ಐಫೋನ್ 4Sನ ಅಧಿಕ ಬ್ಯಾಟರಿ ಖರ್ಚಿನ ಸಮಸ್ಯೆಯನ್ನು ಆಪಲ್ ನಿವಾರಿಸಿದೆ.ಇದಕ್ಕೆ ತಂತ್ರಾಂಶ ಪರಿಹಾರವನ್ನದು ಅವಲಂಬಿಸಿದೆ.ಸಮಸ್ಯೆ ನಿವಾರಿಸಿದ್ದು ಹೇಗೆ ಎಂಬುದು ಸ್ಪಷ್ಟವಿಲ್ಲವಾದರೂ,ಐಫೋನಿನ ಆಪರೇಟಿಂಗ್ ವ್ಯವಸ್ಥೆ ಐಓಎಸ್‌ನಲ್ಲಿ ಬದಲಾವಣೆ ಮಾಡುವ ಮೂಲಕ ಬ್ಯಾಟರಿ ಖರ್ಚು ತಗ್ಗಿಸಲು ಆಪಲ್ ಶಕ್ತವಾಗಿದೆ.ಟ್ವಿಟರ್ ಸಂದೇಶಗಳಲ್ಲಿ ಕೆಲವು ಗ್ರಾಹಕರು ತಮ್ಮ ಸಮಸ್ಯೆ ನಿವಾರಣೆಯಾಗಿ ಬರೆದಿದ್ದರೂ,ಇನ್ನು ಹಲವರು ಈಗಲೂ ಸಮಸ್ಯೆ ಮುಂದುವರಿದಿದೆ ಎಂದು ಪ್ರತಿಕ್ರಿಯಿಸಿದವರಿದ್ದಾರೆ.
-----------------------------------------------------
ಗೂಗಲ್ ವೆಟರನ್ಸ್
ಗೂಗಲ್ ಯುಟ್ಯೂಬ್ ಮತ್ತು ಗೂಗಲ್+ ಸೇವೆಗಳಲ್ಲಿ ಗೂಗಲ್ ವೆಟರನ್ಸ್ ಎನ್ನುವ ವಿಭಾಗವನ್ನು ತೆರೆದಿದೆ.ಅಮೆರಿಕಾದ ಸೈನಿಕರು ಇರಾಕ್,ಅಪಘಾನಿಸ್ತಾನ ಮುಂತಾದೆಡೆಯಿಂದ ತಮ್ಮ ಸೇವೆ ಮುಗಿಸಿ,ಮನೆಗೆ ಮರಳಿದ ಬಳಿಕ,ಅವರಿಗೆ ನೆರವಾಗುವಂತಹ ವಿಡಿಯೋ,ಹಾಡು ಮತ್ತಿತರ ಮನರಂಜನೆಯ ಅಂಶಗಳಿಲ್ಲಿ ಲಭ್ಯವಾಗಿವೆ.ಸೈನಿಕರಿಗೆ ಏಕಾಂತ ಅನುಭವಕ್ಕೆ ಬರದಂತೆ ಮಾಡುವುದು,ಮತ್ತು ಅವರನ್ನು ಉಲ್ಲಸಿತರನ್ನಾಗಿ ಇಡಲು ಬೇಕಾದ ಐಟಂ‌ಗಳಿಗೆ ಇಲ್ಲಿ ಒತ್ತು.
*ಅಶೋಕ್‌ಕುಮಾರ್ ಎ

ಉದಯವಾಣಿ
*ಅಶೋಕ್‌ಕುಮಾರ್ ಎ

Monday, November 07, 2011

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!

ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ!

ಅಗ್ಗದ ಸ್ಮಾರ್ಟ್‌ಫೋನುಗಳು ಟೆಲಿಕಾಂ ಕಂಪೆನಿಗಳಿಗೆ ದುಬಾರಿಯಾಗುವುದಿದೆ.ಅದರಲ್ಲೂ ಆಂಡ್ರಾಯಿಡ್ ಫೋನುಗಳ ಮಟ್ಟಿಗೆ ಈ ಮಾತು ಹೆಚ್ಚು ಸತ್ಯವೆನ್ನುವುದು,ಈಗ ಹೆಚ್ಚಿನ ಸೇವಾದಾತೃಗಳಿಗೆ ಅನುಭವಕ್ಕೆ ಬಂದಿದೆ.ಅಗ್ಗದ ಸ್ಮಾರ್ಟ್‌ಫೋನುಗಳ ಯಂತ್ರಾಂಶ ಬಹು ಸರಳವಾಗಿರಬೇಕು.ಅದರಲ್ಲಿ ಹೊಸ ನಮೂನೆಯ ಯಂತ್ರಾಂಶಗಳಿಗೆ ಅವಕಾಶ ಇಲ್ಲ.ಆಂಡ್ರಾಯಿಡ್ ಸ್ಮಾರ್ಟ್‌ಫೋನ್ ನಿರ್ವಹಣಾ ತಂತ್ರಾಂಶವಾದರೋ,ಆಗಾಗ ಹೊಸ ಆವೃತ್ತಿಯಾಗಿ ಬಿಡುಗಡೆಯಾಗುತ್ತದೆ.ಗೂಗಲ್ ಕಂಪೆನಿ ಅಭಿವೃದ್ಧಿ ಪಡಿಸುವ ಈ ಆಂಡ್ರಾಯಿಡ್ ಓಎಸ್,ಹೊಸ ಯಂತ್ರಾಂಶಗಳ ಬಳಕೆಗೆ ಸೂಕ್ತವಾಗುವ ಹಾಗೆ ಅಭಿವೃದ್ಧಿಯಾಗುತ್ತದೆ.ಇದಕ್ಕೆ ಸರಿಯಾಗಿ ಯಂತ್ರಾಂಶ ಲಭ್ಯವಿರುವ ಸ್ಮಾರ್ಟ್‌ಫೋನುಗಳಲ್ಲಿ,ಇವು ಅತ್ಯುತ್ತಮ ಫಲಿತಾಂಶ,ಕಾರ್ಯದಕ್ಷತೆ ಒದಗಿಸುತ್ತದಾದರೂ,ಹಳೆಯ ಅಥವಾ ಅಗ್ಗದ ಸ್ಮಾರ್ಟ್‌ಫೋನುಗಳಿಗೆ ಹೊಸ ಆಂಡ್ರಾಯಿಡ್ ಓಎಸ್,ತ್ರಾಸ ಕೊಡುತ್ತದೆ.ಕೆಲವೊಮ್ಮೆ ಯಂತ್ರಾಂಶವನ್ನು ಕೆಡಿಸುತ್ತದೆ.ಇವುಗಳನ್ನು ಸರಿಪಡಿಸಲು ಸೇವಾದಾತೃಗಳು ಬಹಳಷ್ಟು ಖರ್ಚು ಮಾಡಬೇಕಾಗಿ ಬರುತ್ತದೆ.ಎರಡು ಬಿಲಿಯನ್ ಡಾಲರುಗಳ ಖರ್ಚು ಇದಕ್ಕೆ ಬಂದಿರುತ್ತದೆ  ಎನ್ನುವುದು ಒಂದು ವರ್ಷದ ಅಂದಾಜು ಮೊತ್ತ.ಇತರ ಓಎಸ್‌ಗಳ ಮಟ್ಟಿಗೆ ಇಷ್ಟು ಸಮಸ್ಯೆಯಿಲ್ಲ-ಅವು ಹೊಸ ಅವೃತ್ತಿ ತರುವುದು ನಿಧಾನವಾಗಿರುವುದೇ ಇದಕ್ಕೆ ಕಾರಣ.
--------------------------------
ಇಂಜೆಕ್ಷನ್ ಟ್ರೈನರ್
ವೃದ್ಧರ ಕೈಯ ಬೆರಳು ಕೆಲವೊಮ್ಮೆ ಮಡಚಿದ ಹಾಗೆ ಆಗುವುದಿದೆ.ಹೀಗಾದಾಗ,ಅದಕ್ಕೆ ಕಿಣ್ವದ ಇಂಜೆಕ್ಷನ್ ಕೊಡಬೇಕಾಗುತ್ತದೆ.ಈ ಇಂಜೆಕ್ಷನ್‌ನೂ ಬಹು ಜಾಗ್ರತೆಯಿಂದ ,ಸರಿಯಾದ ಸ್ಥಳಕ್ಕೆ ಚುಚ್ಚಬೇಕಾಗುತ್ತದೆ.ಈ ಇಂಜೆಕ್ಷನ್ ನೀಡಲು ಅಭ್ಯಾಸ ಮಾಡಿಕೊಳ್ಳಲು ಅನುವು ಮಾಡುವ ಟ್ರೈನಿಂಗ್ ಹಸ್ತ ಇದೀಗ ಲಭ್ಯ.ಹೀಗೆ "ಹೆಣ" ಕೊಯ್ಯಲು ಅಭ್ಯಾಸ  ಮಾಡುವ "ಕೃತಕ ಹೆಣ"ವೂ ಈಗ ಲಭ್ಯವಿದೆ.ಈ ಬೆಳವಣಿಗೆಗಳು ವೈದ್ಯಕೀಯ ಪ್ರಪಂಚ ಮುಂದುವರಿಯುತ್ತಿರುವ ರೀತಿಯನ್ನು ತೋರಿಸುತ್ತದೆ.
---------------------------------------
ಐಫೋನ್4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆ

ಐಫೋನಿನ ಹೊಸ ಮಾದರಿಯಾದ 4Sನಲ್ಲಿ ಬ್ಯಾಟರಿ ಬಾಳಿಕೆ ಕಡಿಮೆಯಂತೆ.ಈ ದೂರು ಬಳಕೆದಾರರಿಂದ ಕೇಳಿ ಬರಹತ್ತಿದೆ.ಆದರೆ ಆಪಲ್ ಇದಕ್ಕೆ ನೇರವಾದ ಪ್ರತಿಕ್ರಿಯೆ ನೀಡದೆ ಮೌನವಹಿಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.ಸ್ಥಾನ ಪತ್ತೆ ಮಾಡುವ ಸೇವೆಯನ್ನು ಚಾಲೂ ಇಟ್ಟರೆ,ಐಫೋನು ಬ್ಯಾಟರಿ ಖರ್ಚಾಗುವುದು ಬಹು ಬೇಗ ಎಂದು ಕೆಲವರ ಅನುಭವ.ಅಲ್ಲದೆ ಹೊಸ ಐಫೋನ್‌ನಲ್ಲಿ ಹೊಸ ಸಂಸ್ಕಾರಕ ಇರುವ ಕಾರಣ,ಇದೂ ಬ್ಯಾಟರಿ ತೀವ್ರಗತಿಯಲ್ಲಿ ಖರ್ಚಾಗಲು ಕಾರಣವಾಗಿರಬಹುದು ಎಂದು ಅಂದಾಜು.ಆದರೆ ಇವೆಲ್ಲಾ ಊಹಾಪೋಹಗಳು ಮಾತ್ರಾ.ಅಧಿಕೃತವಾಗಿ,ಈ ಬಗ್ಗೆ ಮಾಹಿತಿಯಿಲ್ಲ.ಬ್ಯಾಟರಿಯು ಎಂಟು ಗಂಟೆ ಮಾತನಾಡಲು,ಆರು ಗಂಟೆ ಅಂತರ್ಜಾಲ ಜಾಲಾಡಲು ಮತ್ತು ಹತ್ತು ಗಂಟೆ ವಿಡಿಯೋ ನೋಡಲು ಸಾಕಾಗಬೇಕು.ಆದರೆ ಕೆಲವು ಬಳಕೆದಾರರಿಗೆ ಇದಕ್ಕಿಂತ ಬಹು ಕಡಿಮೆ ಬ್ಯಾಟರಿ ಬಾಳಿಕೆಯ ಅನುಭವಾಗಿದೆ.ಆಪಲ್‌ನ  ಹೊಸ ಓಎಸ್ ತಂತ್ರಾಂಶ ಬಳಕೆಯಾಗುತ್ತಿದೆ.ಇದೂ ಈ ವ್ಯತ್ಯಾಸಕ್ಕೆ ಕಾರನವೆನ್ನುವ ಗುಮಾನಿಯಿದೆ.
ಆಪಲ್ ಕಂಪೆನಿಯು ತನ್ನ ಐಸ್ಟೋರುಗಳಲ್ಲಿ ತಂತ್ರಾಂಶ ಅಭಿವೃದ್ಧಿ ಪಡಿಸುವವರು ಲಭ್ಯವಾಗಿಸುವ ತಂತ್ರಾಂಶಗಳು ಭದ್ರತಾ ಕೋರೆಯನ್ನು ಹೊಂದಿಲ್ಲ ಎಂದು ಖಾತರಿ ಪಡಿಸಿಕೊಳ್ಳಲೋಸುಗ ಸ್ಯಾಂಡ್‌ಬಾಕ್ಸ್ ಎನ್ನುವ ತಂತ್ರಜ್ಞಾನವನ್ನು ಬಳಸುವುದನ್ನು ಕಡ್ಡಾಯಗೊಳಿಸಿದ್ದಾರೆ.ಅದರ ಪ್ರಕಾರ ಪ್ರತಿ ತಂತ್ರಾಂಶವನ್ನೂ ಆಪಲ್ ಕಂಪೆನಿಯು ತನ್ನದೇ ಅಂಶವನ್ನು ಸೇರಿಸಿದ ಬಳಿಕವಷ್ಟೇ ಒಪ್ಪಿಗೆ ನೀಡುತ್ತದೆ.ಹೀಗಾಗಿ ತಂತ್ರಾಂಶಗಳನ್ನು ಐಫೋನು ಅಥವಾ ಐಪ್ಯಾಡುಗಳಲ್ಲಿ ಬಳಸಿದಾಗ,ಅವು ಕಂಪ್ಯೂಟರ್ ಜಾಲ,ಸ್ಮರಣಕೋಶ,ಕಡತಗಳನ್ನು ಬಳಸುವ ಮುನ್ನ ಬಳಕೆದಾರನ ಅನುಮತಿ ಪಡೆಯಬೇಕಾಗುತ್ತದೆ.ಅವುಗಳ ದುರ್ಬಳಕೆ ಅಗುವುದು,ಅವುಗಳಿಗೆ ಹಾನಿ ಆಗುವುದು ತಪ್ಪಿಸಲು ಹೀಗೆ ಮಾಡಲಾಗಿದೆ.ತಂತ್ರಾಂಶಕ್ಕೆ ವ್ಯವಸ್ಥೆಯ ಸರ್ವಸ್ವವನ್ನೂ ಬಿಟ್ಟುಕೊಡದೆ,ಬಳಕೆದಾರ ಅನುಮತಿಸಿದರೆ ಮಾತ್ರಾ ಅವನ್ನು ನೀಡುವ ಈ ತಂತ್ರಜ್ಞಾನವೇ ಸ್ಯಾಂಡ್‌ಬಾಕ್ಸ್ ತಂತ್ರಜ್ಞಾನ.
--------------------------------------------
ಜಿಮೇಲ್ ಹೊಸ ಲುಕ್-ಕ್ಷಣದಲ್ಲಿ ಗೂಗಲಿಸಿ
ಜಿಮೇಲ್ ಮಿಂಚಂಚೆಯಲ್ಲಿ ಗೂಗಲ್ ಹೊಸ ಲುಕ್ ನೀಡಿದೆ.ಬಳಕೆದಾರರಿಗೆ ಹೆಚ್ಚು ಆಯ್ಕೆಗಳನ್ನು ನೀಡುವ,ಚುರುಕುಗತಿಯಲ್ಲಿ ಶೋಧಿಸುವ ಹೊಸ ಸೇವೆ-ಜತೆಗೆ ಬಳಕೆದಾರರಿಗೆ ಜಿಮೇಲ್ ಹೇಗೆ ಕಾಣಿಸಬೇಕು,ಎಷ್ಟು ಮಿಂಚಂಚೆಗಳು ಒಂದು ಬಾರಿಗೆ ಕಾಣಿಸಿಕೊಳ್ಳಬೇಕು ಮುಂತಾದ ನಿಯಂತ್ರಣ ಸಾಧ್ಯವಾಗುವುದು ಆಗಿರುವ ಬದಲಾವಣೆ.

ಗೂಗಲ್ ತನ್ನ ಶೋಧ ಕ್ರಮವನ್ನು ಬದಲಿಸಿದೆ.ಹೀಗಾಗಿ,ಈಗ ನಿಮಗೆ ಅತಿ ಬೇಗ ಮಾತ್ರವಲ್ಲದೆ,ಅಂತರ್ಜಾಲದ ಕೊನೆಯ ಕ್ಷಣದ ಬದಲಾವಣೆಗಳನ್ನೂ ಗಮನಿಸಿ ಶೋಧಿಸಲು ಸಾಧ್ಯ.ಟ್ವಿಟರ್,ಫೇಸ್‌ಬುಕ್ ಬಳಕೆದಾರರು ಸುದ್ದಿ ಸಮಾಚಾರಗಳನ್ನು ಶೋಧಿಸಲು ಸಮರ್ಥರಾದ ನಂತರ ಗೂಗಲ್ ಶೋಧ ತುಸು ಮುಲೆಗುಂಪಾಗಿತ್ತು-ಜತೆಗೆ ಬಿಂಗ್ ಸ್ಪರ್ಧೆ ಬೇರೆ.ಹೀಗಾಗಿ ಗೂಗಲ್ ಹೆಚ್ಚು ಸಮರ್ಥವಾದ ಶೋಧ ಫಲಿತಾಂಶ ನೀಡುವ ವಿಧಾನವನ್ನು ಆವಿಷ್ಕರಿಸಬೇಕಾಯಿತು.
---------------
ಮಂಗಳ ಯಾತ್ರೆಗೆ ಮಂಗಳ
ಮಂಗಳ ಗ್ರಹಕ್ಕೆ ಹೋಗಿ ಮರಳುವ ಬಾಹ್ಯಾಕಾಶ ಯಾತ್ರೆಯ "ಅನುಭವ" ಪಡೆಯಲು ಸಂಶೋಧಕರಿಗೆ ಸಾಧ್ಯವಾಗಿದೆ.ಐನೂರ ಇಪ್ಪತ್ತು ದಿನಗಳ ಯಾತ್ರೆಯನ್ನವರು ಜತೆಗೆ ಕೈಗೊಂಡು ಬಾಹ್ಯಾಕಾಶ ವಾಹನದಿಂದ ಹೊರ ಬಂದಾಗ,ಉತ್ಸಾಹ ಭರಿತರಾಗಿದ್ದರೂ ,ದೀರ್ಘಾವಧಿಯ ಏಕಾಂತವಾಸ ಅವರನ್ನು ಕಂಗೆಡಿಸಿದ್ದು ಒಂದು ಮೂಲೆಯಿಂದ  ಇಣುಕುತ್ತಿತ್ತು.ರಶ್ಯನ್,ಪ್ರೆಂಚ್,ಇಟೆಲಿ-ಕೊಲಂಬಿಯಾ,ಚೀನೀ ಮೂಲದಗಗನಯಾತ್ರಿಗಳು ಮಂಗಳಗ್ರಹ ಯಾತ್ರೆಯ ಅನುಭವ ಪಡೆಯಲು ಕಳೆದ ಸುಮಾರು ಎರಡು ವರ್ಷಗಳಿಂದ ಈ ವಾಹನದಲ್ಲಿ ಕಳೆದರು.ಅವರಿಗೆ ಗುರುತ್ವಬಲ,ಭಾರರಹಿತ ಸ್ಥಿತಿ ಮುಂತಾದ ಬಾಹ್ಯಾಕಾಶ ಯಾನದ ನೈಜ ಅನುಭವ ನೀಡುವ ಪರಿಸರವನ್ನು ವಾಹನದೊಳಗೆ ನಿರ್ಮಿಸಲಾಗಿತ್ತು.ಮಂಗಳಗ್ರಹದಲ್ಲಿ ಇಳಿದು,ಧ್ವಜ ನೆಡುವ,ಅನುಭವವನ್ನೂ ಅವರು ಪಡೆದರು.ಬಾಹ್ಯಕಾಶಯಾನಿಗಳು ಧರಿಸುವ ಭಾರದ ಸೂಟನ್ನೂ ಅವರು ಧರಿಸಿದ್ದರು.ನಿಜ ಹೇಳಬೇಕೆಂದರೆ,ನೈಜ ಯಾನಕ್ಕಿಂತ ಈ ಯಾನ ಕಷ್ಟಕರ-ಯ್ಯಕೆಂದರೆ,ನೈಜ ಯಾನದಲ್ಲಿ ಅವರಿಗೆ ಅಪಾಯ,ಅನುಭವಗಳ ತ್ರಿಲ್ ಸಿಗುತ್ತದೆ.ಆದರಿಲ್ಲಿ ಎಲ್ಲವೂ ಕ್ರುತಕ ಎನ್ನುವುದು ಅವರಿಗೆ ತಿಳಿದಿರುತ್ತದೆ.ತಮ್ಮ ಕುಟುಂಬದವರ ಜತೆ ಬೆರೆಯಲು ಅವರುಗಳಿಗೆ ಅಂತರ್ಜಾಲ ಸಂಪರ್ಕ ನೀಡಲಾಗಿತ್ತಾದರೂ,ಕೆಲವು ಸಂದೇಶಗಳನ್ನು ಉದ್ದೇಶ ಪೂರ್ವಕವಾಗಿ ಕಳೆದು ಹೋಗುವಂತೆ ಮಾಡಿ,ಅವರಿಗೆ ನೈಜ ಸನ್ನಿವೇಶದಲ್ಲಿ ಆಗಬಹುದಾದ ಅನುಭವವನ್ನು ನೀಡಲಾಗಿತ್ತು.ಪ್ರತಿಯೋರ್ವನೂ ಒಂದು ಲಕ್ಷ ಡಾಲರು ಮೊತ್ತ ಪಡೆಯಲಿದ್ದಾನೆ.ಯಾತ್ರೆಯಲ್ಲಿ ಮಹಿಳೆಯರನ್ನು ಬಳಸಲು ಯೋಜಿಸಿತ್ತಾದರೂ,ಕೊನೆಗದು ಗಂಡಸರ ಗುಂಪೇ ಆಯಿತು.ಯಾತ್ರೆಯನ್ನು ರಶ್ಯನ್ ಸಮ್ಶೋಧಕರು ಹಮ್ಮಿಕೊಂಡಿದ್ದರು.
Udayavani
*ಅಶೋಕ್‌ಕುಮಾರ್ ಎ